Monday, August 31, 2009

ಕನ್ನಡ'ಸಿಂಹ'ಗಳನ್ನು ಕಾಡಿದ ನಾಗವಲ್ಲಿಯ ಆತ್ಮ!


ನಾಗವಲ್ಲೀ....

'ರಾರಾ... ಸರಸಕೆ ರಾರಾ...' ಆ ಹಾಡು, ಆ ಹೆಸರು ಬೇತಾಳನ ಮನದಲ್ಲಿ ಗುನುಗತೊಡಗಿತು

ಯಾರೀಕೆ ನಾಗವಲ್ಲಿ.. ಆಕೆ ಯಾರೂ ಇರಲಿ, ಸತ್ತು ಅದೆಷ್ಟೋ ಶತಮಾನಗಳು ಕಳೆದಿರಲಿ... ಆತ್ಮ ಇನ್ನೂ ಬದುಕಿದೆ...ಅಂತೆ!  'ಆಪ್ತ ಮಿತ್ರ' ಎಂಬ ಸಿನಿಮಾದಲ್ಲಿ ಪ್ರತಿಭಾನ್ವಿತ ಮೋಹಕ ನಟಿಯ ಅಕಾಲಿಕ ಸಾವಿಗೆ ನಾಗವಲ್ಲಿಯ ಭೂತವೇ ಕಾರಣವಂತೆ!

 ಆ  ಆತ್ಮ ಸಾಹಸ ಸಿಂಹ, ಚಂದ್ರಮುಖಿಪ್ರಾಣಸಖಿ, ಆಸ್ಟ್ರೇಲಿಯನ್ ಬ್ಯೂಟಿ ತಾರಾಗಣದಲ್ಲಿ ನಟಿಸುತ್ತಿರುವ ಹೊಸ ಸಿನಿಮಾಕ್ಕೆ ಕಥೆಯಾಗುತ್ತಿದೆ. ನಾಗವಲ್ಲಿಯ ಆತ್ಮ ಅಲ್ಲ್ಲಿರುವ 'ಆಪ್ತರ ರಕ್ಷಕ'ವಾಗಲಿದೆ ಅಂತೆ. ಆದರೆ 'ಆಪ್ತ ರಕ್ಷಕ' ರೋಲ್ ಹೊತ್ತ 'ಆತ್ಮ' ಸಿನಿಮಾ ತಂಡದ ಸಿಂಹ, ಮುಖಿ,ಬ್ಯೂಟಿಗಳನ್ನು ಕಾಡತೊಡಗಿತ್ತಂತೆ.... ಆದರೆ ಜ್ಯೂತಿಷಿಯೊಬ್ಬರ ಸಲಹೆಯಂತೆ 'ಹೋಮ' ಎಲ್ಲರನ್ನೂ ರಕ್ಷಿಸಿತಂತೆ...
ದಿನಪೂರ್ತಿ ವಾರಪೂರ್ತಿ ಸುದ್ದಿ ನೀಡುವ ಕನ್ನಡ ಟಿವಿ ಚಾನೆಲ್‌ನಲ್ಲಿ ನೀಡಿದ 'ಸಿನಿಮಾ ಕಥೆ'ಯೊಂದು ಬೇತಾಳನ ಅಮಾನುಷ ಬುದ್ಧಿಶಕ್ತಿಗೂ ಅತೀತವಾಗಿತ್ತು....

ಮೂಢನಂಬಿಕೆಯಲ್ಲಿ ಹಳ್ಳಿಗರಿಗಿಂತಲೂ ಪಟ್ಟಣದವರೇ ಒಳ 'ಕಣ್ಣು ಕಾಣದ ಗಾವಿಲರು'ಎಂಬ ಭಾವನೆ ಇತ್ತು. ಸಿನಿಮಾ ರಂಗದ 'ಸಾಹಸ ಸಿಂಹ'ರು, 'ಚಂದ್ರಮುಖಿಪ್ರಾಣಸಖಿ'ಯರು ಆತ್ಮ, ದೆವ್ವ, ಪರಕಾಯ ಪ್ರವೇಶ ಎಂದೆಲ್ಲಾ ಮಾತನಾಡುತ್ತಿದ್ದುದನ್ನು ಕೇಳಿ ಬೇತಾಳನೊಳಗಿನ ವೈಚಾರಿಕತೆಯೂ ಬೆವರಿತ್ತು...

ಜನ್ನಮನ್ನಣೆ ಕಳೆದು ಕೊಂಡವರು, ಸಾರ್ವಜನಿಕ ಜೀವನದಲ್ಲಿದ್ದು ನಿರಂತರ ಸೋಲಿನ ಸರಕನ್ನು ಜೋಳಿಗೆಯಲ್ಲಿ ತುಂಬಿಕೊಳ್ಳುತ್ತಿರುವವರು ಪ್ರಚಾರಕ್ಕೆ ಯಾವೆಲ್ಲ ವಿಧಾನಗಳನ್ನು ಅನುಸರಿಸಬಹುದು... ಅರ್ಥವಾಗದೆ ಬೇತಾಳ ಕರಕರ ತಲೆ ಕೆರೆದುಕೊಂಡಿತು.

ಹೋಮ ಹವನಗಳು, ದೆವ್ವಪಿಶಾಚಿಗಳ ಮೊರೆಹೊಗುವುದನ್ನು ಮಾಡುತ್ತಾರೆ. ಸಿನಿಮಾ ಮಂದಿ ಮೂಡನಂಬಿಕೆಯನ್ನು ಹಂಚುವುದರಲ್ಲಿ ಸಿದ್ಧಹಸ್ತರು. ಈಗಂತೂ ಮಹಾನಗರಗಳು, ಅಲ್ಲಿ ಕೇಂದ್ರವಾಗಿರಿಸಿ ಎಲ್ಲೆಡೆಗೆ ಬಿತ್ತರವಾಗುವ ದೃಶ್ಯಮಾದ್ಯಮಗಳು ಪ್ರೇತಪಿಶಾಚಿಗಳ ಪ್ರಮೋಟರ್‌ಗಳಂತೆ ವರ್ತಿಸತೊಡಗಿರುವುದನ್ನು ಕಂಡು ಬೇತಾಳನಿಗೂ ವ್ಯಸನವಾಗಿತ್ತು. ಪಟ್ಟಣದ ಜನ ವಿಚಾರವಂತರು ಎಂಬುದು ಎಲ್ಲರ ನಂಬಿಕೆ. ಆದರೆ ಇವರು ಗಮಾರರಂತೆ ವರ್ತಿಸುತ್ತಿರುವುದು ಕಂಡು ವ್ಯಸನವಾಯಿತು.

ಹೆಗಲ ಮೇಲಿದ್ದ ಶವದೊಳಗಿನ ಬೇತಾಳ ಇಷ್ಟರಲ್ಲೇ ಮಾತು ಆರಂಭಿಸಬೇಕಿತ್ತು... ಇನ್ನೂ ಮೌನವಹಿಸಿದೆಯಲ್ಲ.. ರಾಜನ ಗಮನಿಸಿದ. ಬೇತಾಳ ಸುಮ್ಮನೆ ಕುಳಿತಿರಲಿಲ್ಲ. ರಾಜನಿಗೆ ತಿಳಿಸಬೇಕಿದ್ದ ಮಾಹಿತಿಯನ್ನು ತನ್ನ ಲ್ಯಾಪ್‌ಟಾಪ್‌ನಲ್ಲಿ ಸಿದ್ಧಪಡಿಸುತ್ತಿತ್ತು. ಸುದ್ದಿವಾಹಿಯಲ್ಲಿ ತಾನು ನೋಡಿದ 'ಸಿನಿಮಾ ಕಥೆ'ಯ ಆಯ್ದ ಭಾಗಗಳನ್ನು ವಿಕ್ರಮಾದಿತ್ಯನಿಗಾಗಿ ರೆಫರೆನ್ಸ್‌ಗೆ ಇರಿಸಿಕೊಂಡಿತ್ತು....

ಶವದೊಳಗೆ ಸೇರಿದ್ದ ಬೇತಾಳ ಮಾತನಾಡತೊಡಗಿತು...
ಆದರೆ ರಾಜ ಅದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದನೇ ವಿನಃ ಪ್ರತ್ಯುತ್ತರ ನೀಡುತ್ತಿರಲಿಲ್ಲ. ಅರಸನನ್ನು ಮಾತನಾಡಿಸುವುದು, ತನ್ನ ಜಿಜ್ಞಾಸೆಯನ್ನು ನಿವಾರಿಸುವುದು ಎರಡೂ ಬೇತಾಳನಿಗೆ ಮುಖ್ಯವಾಗಿತ್ತು!
ರಾಜ ನಿನ್ನ ಪ್ರಯಾಣದ ಶ್ರಮ ಪರಿಹರಿಸಲು ಜನರ ಮೂಢನಂಬಿಕೆಯ ಕುರಿತಾದ ಕಥೆ ಅಲ್ಲ ನೈಜ ವಿಷಯವನ್ನು ಹೇಳುತ್ತೇನೆ ಕೇಳು. ಅತಿ ಜ್ಞಾನವೂ ಮನೋವಿಕಲ್ಪಕ್ಕೆ ಕಾರಣವಾಗುವುದೇ ಎಂದು ತಿಳಿಸು ಎಂದು 'ಕೊರೆಯ'ತೊಡಗಿತು.
ವರ್ಷದ ಹಿಂದೆ ಕನ್ನಡದಲ್ಲೊಂದು ಸಿನಿಮಾ ಬಂದಿತ್ತು... 'ಆಪ್ತಮಿತ್ರ'. ರಾಜನೇ ಅದನ್ನು ದೆವ್ವದ ಕಥೆ ಅನ್ನಬೇಕೊ, ಅತೃಪ್ತ ಆತ್ಮದ ಪರಕಾಯ ಪ್ರವೇಶ ಅನ್ನಬೇಕೊ ಗೊತ್ತಿಲ್ಲ. ಆ ಆತ್ಮದ ಪೂರ್ವದೇಹದ ಹೆಸರು ನಾಗವಲ್ಲಿ. ಕೇರಳದ ರಾಜನರ್ತಕಿ. ಕಥೆ ಅಲ್ಲಿಂದ ಆರಂಭವಾಗುತ್ತದೆ. ಅದು ಚಿತ್ರ ನೋಡಿದ ಎಲ್ಲರಿಗೂ ಗೊತ್ತು.
 ಆದರೆ ನಾನೀಗ ಹೇಳುತ್ತಿರುವುದು ಆ ಚಿತ್ರದ ಕಥೆ ಅಲ್ಲ. ಅಂಥದೇ ಚಿತ್ರವನ್ನು ಅದೇ ನಿರ್ದೇಶಕ, ನಾಯಕ ಸೇರಿ ತಯಾರಿಸುತ್ತಾರೆ. ಕಥೆ ಅದೇ ನಾಗವಲ್ಲಿಯನ್ನು ಸುತ್ತುವರಿದು ಮುಂದುವರಿದಿದೆ. ಆದರೆ ಇಲ್ಲಿ ಆತ್ಮ ಚಿತ್ರದ ಕೊನೆಯಲ್ಲಿ ಇನ್ನೂ ಕ್ಲೈಮ್ಯಾಕ್ಸ್ ಪಡೆಯುತ್ತಂತೆ. ಸಿನಿಮಾಕ್ಕೆ ಅದೇನೊ '.... ರಕ್ಷಕ' ಅಂತ ಹೆಸರಿಟ್ಟಿದ್ದಾರಂತೆ. ಇದರಲ್ಲೇನೂ ವಿಶೇಷ ಇಲ್ಲ.
ವಿಶೇಷ ಇಲ್ಲಾಂದ್ರೆ ಮತ್ಯಾಕೆ ತಲೆ ತಿನ್ನೋಕೆ ಹೊರಟಿದ್ದೀಯಾ ಅಂತ ಕೇಳಬೇಕೆಂದೆನಿಸಿದರೂ, ರಾಜ ಮೌನಪಾಲಿಸಿದ.
ಬೇತಾಳ ತನ್ನ ಏಕಪಾತ್ರಾಭಿನಯ ಮುಂದುವರುಸಿತು...

ಈ ಹೊಸ ಸಿನಿಮಾ ತಂಡವನ್ನು 'ನಾಗವಲ್ಲಿ' ಕಾಡಿದ್ದಾಳಂತ. ಅದರಲ್ಲಿ ನಟಿಸುವ ನಾಯಕ 'ಸಿಂಹ' ಅವರನ್ನು ಕುದುರೆಯ ರೂಪದಲ್ಲಿ ಕಾಡಿದರೆ, ನಾಯಕಿಯಲ್ಲೊಬ್ಬರಾದ 'ಆಸ್ಟ್ರೇಲಿಯನ್ ಬ್ಯೂಟಿ'ಯನ್ನು ಅವರು ತಂಗಿದ್ದ ಹೊಟೇಲ್ ರೂಮಿನಲ್ಲಿ 'ನೆರಳಿನ ರೂಪ' ಹೊದ್ದು ಬಂದು ಹೆದಿರಿಸಿತಂತೆ. ಆಕೆ ಹೆದರಿ ನಾಲ್ಕಾರು ದಿನ ಜ್ವರ ಬಂದು ಮಲಗಿದರಂತೆ. ಅದೇ ಬ್ಯೂಟಿಯ ಕಾರನ್ನು ಅಪಘಾತ ಮಾಡಲೂ ನಾಗವಲ್ಲಿಯ ಆತ್ಮ ಪ್ರಯತ್ನಿಸಿತಂತೆ. ಚಿತ್ರ ತಂಡದ ಇನ್ನೊಬ್ಬರು ನಾಯಕಿ 'ಚಂದ್ರಮುಖಿ ಪ್ರಾಣ ಸಖಿ' ಅವರು ಮೈಸೂರಿನಲ್ಲಿ ಜೋಡಿಯೊಂದು ಆತ್ಮ ಹತ್ಯೆ ಮಾಡುವುದನ್ನು ಕಣ್ಣಾರೆ ಕಂಡು ದಿಗ್ಮೂಢರಾದರಂತೆ. ಅದೂ ನಾಗವಲ್ಲಿಯ ಕೈಚಳಕ ಅಂತೆ... ನಾಗವಲ್ಲಿ ಸತ್ತಿದ್ದರೂ ಅವಳ ಆತ್ಮ ಇನ್ನೂ ಬದುಕಿದೆ ಅಂತೆ. ಬೆಂಗಳೂರಿಗೆ ಬಂದು ಸುತ್ತುತ್ತಿದೆ ಅಂತೆ. ಆಕೆಯ ಕಥೆಯನ್ನು ಹಾಡಾಗಿ ನಟಿಸಿ ನೃತ್ಯಗಾತಿ ಒಬ್ಬಳನ್ನೂ ನಾಗವಲ್ಲಿ ಪ್ರಜ್ಞೆ ತಪ್ಪಿಸಿದ್ದಳಂತೆ.

ಅಂತೆ... ಅಂತೆ... ಅಂತೆ..
ಇಂತಹ 'ಅಂತೆ' ಅದೆಷ್ಟೊ ಸವಾಲುಗಳನ್ನು ಎದುರಿಸಿ ನಾಗವಲ್ಲಿಯ ಕೀಟಲೆಗಳನ್ನು ಸಹಿಸಿ ಚಿತ್ರೀಕರಣ ಮುಕ್ತಾಯ ಮಾಡಲಾಗಿದೆ ಅಂತೆ. ಇನ್ನು ಉಳಿದಿರುವುದು ಪೋಸ್ಟ್ ಪ್ರೊಡಕ್ಷನ್ ವರ್ಕ್ಸ್ ಅಷ್ಟೇ ಅಂತೆ...
ರಾಜನೇ ಮಹಾನಗರದ ಜನರು ದೆವ್ವದ ಕಥೆಗಳಿಗೆ ಇಷ್ಟೊಂದು ಮಹತ್ವ ನೀಡುತ್ತಿರುವುದು ಯಾಕೆ? ನಾಗವಲ್ಲಿಯ ಕಥೆಯನ್ನು ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲೂ ಸಿನಿಮಾ ಮಾಡಿದ್ದರೂ ಅಲ್ಲಿನವರನ್ನು 'ಆಕೆ' ಕಾಡಲಿಲ್ಲ ಯಾಕೆ? ನಾಗವಲ್ಲಿಯ ಇನ್ನೊಂದು ಇನ್ನೊಂದು ಹೊಸ ಚಿತ್ರ ಮಾಡ ಹೊರಟ ಕನ್ನಡದ 'ಸಾಹಸ ಸಿಂಹ'ರನ್ನು ಹೆಜ್ಜೆಹೆಜ್ಜೆಗೂ ಕಾಡಿದ್ದು ಯಾಕೆ? ನಿನಗೆ ಉತ್ತರ ತಿಳಿದೂ ಹೇಳದಿದ್ದರೆ ನಿನ್ನ ತಲೆ ರಾಜಕೀಯ ಪಕ್ಷಗಳಂತೆ ಒಡೆದು ನುಚ್ಚು ನೂರಾಗುತ್ತದೆ....

ರಾಜ ಮಾತನಾಡ ತೊಡಗಿದ:


ಮಾರುಕಟ್ಟೆಯಲ್ಲಿ ಚಲಾವಣೆ ಕಳೆದುಕೊಳ್ಳತೊಡಗಿದಾಗ ಅನೇಕರು ತಮ್ಮ ಅಸ್ತಿತ್ವಕ್ಕಾಗಿ ವಿವಾದಗಳನ್ನು ಹುಟ್ಟುಹಾಕಿಕೊಳ್ಳುತ್ತಾರೆ. ಪ್ರೇಮಕಾಮಗಳ ಗಾಸಿಪ್, ಗಣ್ಯರ ಮೇಲೆ ಆಕ್ಷೇಪಾರ್ಹ ಹೇಳಿಕೆ, ವಿವಾದಿತ ಅಂಶಗಳನ್ನು ಹೊತ್ತ ಪುಸ್ತಕ ರಚನೆ ಇತ್ಯಾದಿ.....
ಸಿನಿಮಾ ಮಂದಿಗೆ ಪ್ರಚಾರ ಬೇಕೇ ಬೇಕು ತಾನೆ! ಹಾಗಾಗಿ ಪ್ರದರ್ಶನಕ್ಕೆ ಮೊದಲು ಜನರ ಕುತೂಹಲ ಕೆರಳಿಸಲು ಇಂತಹ ಪ್ರಯತ್ನ ಮಾಡುತ್ತಾರೆ. ಇಲ್ಲವಾದರೆ ಮಲೆಯಾಳಂದ 'ಮಣಿ ಚಿತ್ರ ತಾಯ್'ನಲ್ಲಿ ನಾಗವಲ್ಲಿಗೆ ಜೀವ ತುಂಬಿದ ನಟಿ, ನೃತ್ಯ ಪಟು ಶೋಭನಾಗೆ ಆವರಿಸಿದ 'ಆತ್ಮ ಚೇಷ್ಟೆ' ಕನ್ನಡದ ಮೋಹಕ ನಟಿಯನ್ನು ಪೀಡಿಸಿ ಬಲಿ ತೆಗೆದುಕೊಳ್ಳಲು ಸಾಧ್ಯವೇ? ಆತ್ಮ ಯಾರನ್ನೂ ಪೀಡಿಸಲಾರದು. ದೇಹ ಇಲ್ಲದ ಆತ್ಮ ಮೂರ್ತ ಅಲ್ಲ ಎಂಬುದನ್ನು ಗಮನಿಸು. ಇದು ಸಿನಿಮಾ ಮಂದಿಯ ಪ್ರಚಾರದ ಗಿಮಿಕ್. ನಾಗವಲ್ಲಿ ಕುರಿತ ಇನ್ನೊಂದು ಚಿತ್ರ ಅಂದಾಗ ಪ್ರೇಕ್ಷಕ ಜರಲ್ಲಿ ಆಸಕ್ತಿ ಇಲ್ಲವಾಗದಿರಲಿ ಎಂಬ ತಂತ್ರ ಅಷ್ಟೇ.
- ರಾಜ ಮೌನ ಮುರಿದು ಮಾತನಾಡಿ ಮುಗಿಸುತ್ತಿದ್ದಂತೆಯೇ, ಬೇತಾಳ ಹೆಣದೊಂದಿಗೆ ಹೆಗಲಿನಿಂದ ಮಾಯವಾಗಿ 'ತಜ್ಞ ಪಕ್ಷಾಂತರಿ ರಾಜಕಾರಣಿ'ಯಂತೆ ಮತ್ತೆ ಸ್ಮಶಾನದ ಮರದ ಕೊಂಬೆಯಲ್ಲಿ ನೇತಾಡತೊಡಗಿತು!

No comments:

Post a Comment